ಜೀವವೈದ್ಯಕೀಯ ಎಂಜಿನಿಯರಿಂಗ್ -
ಜೈವಿಕ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಎಂಜಿನಿಯರಿಂಗ್ ತಂತ್ರಗಳ ಅನ್ವಯ (ಬಯೊ ಮೆಡಿಕಲ್ ಎಂಜಿನಿಯರಿಂಗ್), ಗುಂಡಿಗೆಯ ಬಡಿತವನ್ನು ಸ್ತಿಮಿತಗೊಳಿಸಲು ಎಲೆಕ್ಟ್ರಾನಿಕ್ ಗತಿ ಕಾರಕ (ಪೇಸ್ ಮೇಕರ್), ಕೃತಕ ಮೂಳೆ ಸಂಧಿ, ಮೂತ್ರ ಪಿಂಡ ಯಂತ್ರ ಮುಂತಾದವುಗಳ ಆಲೇಖ್ಯರಚನೆಯಂಥ ಸವಾಲುಗಳು, ಅತಿ ಶಬ್ದಗಳ (ಅಲ್ಟ್ರಾಸಾನಿಕ್ಸ್) ನೆರವಿನಿಂದ ಗುಂಡಿಗೆಯ ಅಧ್ಯಯನ, ಸ್ವತಹ  ಗುಂಡಿಗೆಯ  ವಿದ್ಯುತ್ ಸ್ಪಂದನಗಳ ವಿಶ್ಲೇಷಣೆ-ಇವೇ ಮುಂತಾದ ಸಮಸ್ಯೆಗಳು ಜೀವ ವೈದ್ಯಕೀಯ ಎಂಜಿನಿಯರಿಂಗ್‍ನ ಪರಿಧಿಯೊಳಗಿವೆ. ಹೀಗೆ ಈ ವಿಜ್ಞಾನ ವಿಭಾಗ ಓರ್ವ ಭೌತವಿಜ್ಞನಿಯ ದೃಷ್ಟಿಕೋನದಿಂದ ದೇಹಕ್ರಿಯೆಗಳನ್ನು ಅರ್ಥೈಸಲು ಸಹಾಯಕವಾಗಿದೆ. ಇನ್ನೂ ಮುಖ್ಯವಾದದ್ದೆಂದರೆ ದೈಹಿಕ ಪ್ರಾಚಲಗಳನ್ನು (ಉದಾಹರಣೆಗೆ ಗುಂಡಿಗೆ ಬಡಿತ ಮತ್ತು ಮಾಂಸಖಂಡಗಳ ವಿದ್ಯುತ್ ಕ್ರಿಯೆಗಳು) ಸುಲಭವಾಗಿ ಅನುಶ್ರವಣಿಸಿ (ಮಾನಿಟರ್) ಒಂದು ಕೊರತೆಯ ಅಸ್ತಿತ್ವವನ್ನು ತಿಳಿಸಲು ಇಲ್ಲವೇ ವ್ಯಾಧಿಯ ಆಗಮನದ ಮುನ್ಸೂಚನೆಯನ್ನು ನಿಡಲು ಮತ್ತು ಪ್ರಾಯಶಃ ಅದರ ನಿವಾರಣೆಯನ್ನು ಮಾಡಲು ಇದು ಉಪಯುಕ್ತವಾಗಿದೆ. ಇದೊಂದು ಅಂತರಶಾಸ್ತ್ರೀಯ ವಿಜ್ಞಾನವಾಗಿರುವುದು ಇದರ ಸ್ವಭಾವದಿಂದಲೇ ಅನಿವಾರ್ಯ.
ಜೀವಂತ ವ್ಯವಸ್ಥೆಗಳ ಕೆಲವು ವೈದ್ಯುತ ಅಭಿಲಕ್ಷಣಗಳನ್ನು ಪರಿಶೀಲಿಸೋಣ. ವಿದ್ಯುಚ್ಛರೀರ ವಿಜ್ಞಾನದಲ್ಲಿ ನಡೆಸಿರುವ ಪ್ರಯೋಗಗಳ ಪ್ರಕಾರ ಸಮಸ್ತ ಜೀವಂತ ಕೋಶಗಳ ಪೊರೆಗಳ ಅಡ್ಡಕ್ಕು 60-90 ಮಿಲಿವೋಲ್ಟುಗಳಷ್ಟು ಸ್ಥಿರ ವೈದ್ಯುತ ವಿಭವ (ಎಲೆಕ್ಟ್ರೊಸ್ಟ್ಯಾಟಿಕ್ ಪೊಟೆನ್ಶಿಯಲ್) ಇದೆ ಎಂದು ಗೊತ್ತಾಗಿದೆ. (ಕೋಶದ ಹೊರಗಿನ ವಿಭವವನ್ನು ಸೊನ್ನೆ ಎಂದು ಅಂಗೀಕರಿಸಿ ಕೊಂಡಾಗ ಒಳಗಿನ ವಿಭವ ಋಣಾತ್ಮಕ). ಪೊರೆಯ ದಪ್ಪ 100Å (1ಂ=10-8 ಛಿm) ಎಂದು ಅಭಿಗ್ರಹಿಸಿಕೊಂಡರೆ ಆಗ ವಿದ್ಯುತ್ ಕ್ಷೇತ್ರದ ಪರಿಮಾಣ ಸೆಂಟಿಮೀಟರಿಗೆ 100.000 ವೋಲ್ಟುಗಳು. ಇಂಥ ವಿದ್ಯುದ್ಬಲ ನಮ್ಮ ಯಾವ ಎಂಜಿನಿಯರಿಂಗ್ ಅಭ್ಯಾಸದಲ್ಲೂ ಸಾಮಾನ್ಯ ಘಟನೆ ಖಂಡಿತ ಅಲ್ಲ ಮತ್ತು ಇದನ್ನು ಯಾವ ಮನುಷ್ಯ ನಿರ್ಮಿತರೋಧಕವೂ (ಇನ್ಸ್ಯುಲೇಟರ್) ಸಾಧಾರಣವಾಗಿ ತಾಳಿಕೊಳ್ಳಲಾರದು. ಈ ಜೀವವಿದ್ಯುತ್ ವಿಭವಗಳ ಉಗಮ ಎಲ್ಲಿ? ಅವು ಕೋಶಗಳ ಅಯಾನಿಕ್ ಘಟಕಾಂಶಗಳಿಂದ ಒದಗುತ್ತವೆ. (ಅಯಾನುಗಳೆಂದರೆ ವಿದ್ಯುದಾವಿಷ್ಟ ಕಣಗಳು). ಒಂದು ಜೀವಂತ ವ್ಯವಸ್ಥೆಯ ಅಭಿಲಕ್ಷಣಗಳು-ಉದಾಹರಣೆಗೆ ಉದ್ರೇಕಶೀಲತೆ, ಚಲನಶೀಲತೆ ಮತ್ತು ಸಂಕೋಚನಶೀಲತೆ-ಈ ವಿದ್ಯುದ್ಬಲದ ಪರಿಣಾಮಗಳು. ಫ್ರಾನ್ಸ್ ಹಾಗೂ ಅಮೆರಿಕದ ಕರಾವಳಿಗಳಲ್ಲಿ ಸರ್ವಸಾಧಾರಣವಾಗಿ ಇರುವ ಕೆಲವು ಟಾರ್ಪೊಡೊಗಳು ಮತ್ತು ಆಮeóÁನಿನ ವಿದ್ಯುತ್ ಈಲುಗಳು ಬಲು ದೊಡ್ಡ ಪ್ರಾಣಿಗಳನ್ನು ಕೂಡ ಕ್ಷಣಕಾಲ ಸ್ತಂಭನಗೊಳಿಸುವಷ್ಟು ಸಾಮಥ್ರ್ಯ ಇರುವ ವಿದ್ಯುತ್ ಕ್ಷೇತ್ರಗಳನ್ನು ಉತ್ಪಾದಿಸಬಲ್ಲವು. ಮೀನಿನ ದೇಹದಲ್ಲಿ ಕೆಲವು ವಿದ್ಯುದಂಗಗಳು ಇವೆ ಎಂದು ಇವುಗಳ ನೆರವಿನಿಂದ ಮೀನು ತನ್ನ ದೇಹದ ಸುತ್ತ ವಿದ್ಯುತ್ ಕ್ಷೇತ್ರವನ್ನು ಉತ್ಪಾದಿಸುವುದೆಂದು ತಿಳಿದು ಬಂದಿದೆ. ಅಲ್ಲಿಗೆ ಇದೊಂದು ತನ್ನ ಅರಿಯನ್ನೋ ಎರೆಯನ್ನೋ ಮಾರ್ಕೊಳ್ಳಲು ಜೀವವೈದ್ಯುತ ಬಲಗಳನ್ನು ಬಳಸುವ ಜೀವಿಗೆ ಉದಾಹರಣೆ ಎಂದಾಯಿತು.

ಸಾಮಾನ್ಯವಾದ ಬದುಕಿಗೂ ಚಟುವಟಿಕೆಗೂ ದೇಹದ ಬೇರೆ ಬೇರೆ ಭಾಗಗಳು ಒಂದರೊಡನೆ ಇನ್ನೊಂದು ಮತ್ತು ಎಲ್ಲವೂ ಪರಿಸರದೊಡನೆ ಸಂಪರ್ಕದಲ್ಲಿ ಇರಬೇಕಾಗುತ್ತದೆ. ಇಂಥ ಸಂಪರ್ಕಕ್ಕೆ ಬೇಕಾಗುವ ಪ್ರನಾಳಿಯನ್ನು ನರಗಳ ಹೆಣೆಗೆ ಒದಗಿಸುವುದು. ಇಲ್ಲಿಯೂ ಸಂದೇಶಗಳ ಪ್ರೇಷಣೆ ಆಗುವುದು ಅಯಾನಿಕ್ ಕ್ರಿಯೆಯಿಂದಲೇ. ನರಸಂಜ್ಞೆಗಳು ಗೊಂಚಲುಗಳೋಪಾದಿಯಲ್ಲಿ ಸಂಚರಿಸುವುವೆಂದು ಗೊತ್ತಾಗಿದೆ. ಇವು ದೇಹದ ಪರಿಸರದಿಂದ ಸಂದೇಶವನ್ನು ಕೇಂದ್ರನರವ್ಯವಸ್ಥೆಗೆ (ಸೆಂಟ್ರಲ್ ನರ್ವಸ್ ಸಿಸ್ಟಮ್) ಇಲ್ಲವೇ ಕೇಂದ್ರ ನರ ವ್ಯವಸ್ಥೆಯಿಂದ ಹೊರವಲಯದ ಅಂಗಾಂಗಗಳಿಗೆ ಮತ್ತು ಸಂವೇದಕಗಳಿಗೆ ಒಯ್ಯುವ ಒಂದು ತೆರನದ ಅಂಕಸಂಜ್ಞೆಗಳು (ಡಿಜಿಟಲ್ ಸಿಗ್ನಲ್ಸ್) ಎಂದು ಗೊತ್ತಾಗಿದೆ. ಮಾನವ ಮಿದುಳು ಈ ಸಂದೇಶಗಳ ಕೇಂದ್ರೀಯ ಪ್ರಕ್ರಮಕಾರ. ಕಿವಿಗಳು, ಮೂಗು, ಕಣ್ಣುಗಳು ಮುಂತಾದ ಬೇರೆ ಬೇರೆ ಸಂವೇದಕಗಳಿಂದ ಸಂಜ್ಞೆಗಳನ್ನು ಸ್ವೀಕರಿಸುತ್ತವೆ. ಉದಾಹರಣೆಗೆ ವ್ಯಕ್ತಿ ಅಪಾಯಕ್ಕೆ ಎದುರಾದಾಗ ದೇಹದ ಭಂಗಿ ಮತ್ತು ಜಾಗರೂಕತೆಯ ಸ್ಥಿತಿ ಬದಲಾಗುತ್ತವೆ ; ಆತ ಆಗ ಯುದ್ಧ ಸನ್ನದ್ಧನಾಗಿರುತ್ತಾನೆ. ಈ ಕ್ರಿಯೆಯಲ್ಲಿ ಎರಡು ಬಗೆಯ ಸಂಪರ್ಕಗಳು ಉದ್ಯುಕ್ತವಾಗಿವೆ ; ನರಸಂಜ್ಞೀಕರನ ಮತ್ತು ಹಾರ್ಮೋನ್ ಸಂಬಂಧವಾದ ಸಂಜ್ಞೀಕರಣ. ಹೆದರಿಕೆಗೆ ದೇಹದ ತತ್ ಕ್ಷಣದ ಪ್ರತಿಕ್ರಿಯೆಗಳನ್ನು ನರಸಂಜ್ಞೆಗಳು ನಿಭಾಯಿಸುತ್ತವೆ. ಭಯಂಕರ ಆಕೃತಿಯೊಂದನ್ನು ಕಂಡಾಗ ಮೈನವಿರು ನಿಮಿರುವುದು ಇದಕ್ಕೊಂದು ನಿದರ್ಶನ.  ಹಾರ್ಮೋನ್ ಸಂಬಂಧವಾದ ಸಂಜ್ಞೀಕರನವೆಂದರೆ ನೆತ್ತರ ಹೊನಲಿಗೆ ಬಿಡುಗಡೆ ಆಗುವ ಕೆಲವು ಹಾರ್ಮೋನುಗಳು ಎಂದು ಅರ್ಥ. ಉದಾಹರಣೆಗೆ, ಅಪಾಯದ ಮೂರಿ ಸೋಂಕಿದಾಗ ಕೆಲವು ಗ್ರಂಥಿಗಳು ರಕ್ತಪ್ರವಾಹಕ್ಕೆ ಚೆಲ್ಲುವ ಅಡ್ರಿನಲೀನ್. ಇವು ನಿಧಾನವಾಗಿ ಆದರೆ ಬಲು ಕಾಲದವರೆಗೆ ನಿರಂತರವಾಗಿ ವ್ಯವಸ್ಥೆಯಲ್ಲಿ ವರ್ತಿಸುತ್ತಿರುವುವು. ಇದರಿಂದಾಗಿ ದೇಹ ಮುನ್ನೆಚ್ಚರಿಕೆಯ ಸ್ಥಿತಿಯಲ್ಲಿರುವುದು. ನರಸಂಜ್ಞೀಕರಣ ಅಧಿಕ ವೇಗಯುತವಾದ್ದವೆಂಬುದು ಸ್ಪಷ್ಟ. ಇಂಥ ಸಮಸ್ತ ಮಾಹಿತಿ ಸಂಜ್ಞೆಗಳನ್ನು ಮಿದುಳು ಪ್ರಕ್ರಮಿಸುವುದು ಮಾತ್ರವಲ್ಲ ಆ ಸಂದೇಶಗಳನ್ನು ಅದು ತನ್ನ ಜ್ಞಾಪಕದಲ್ಲಿ ದಾಸ್ತಾನಿಸುತ್ತದೆ ಕೂಡ. ಆದ್ದರಿಂದ ಒಂದು ವ್ಯಕ್ತಿಯ ಮಿದುಳಿಗೆ ಪರಿಸರದಿಂದ ದತ್ತಾಂಶ-ಸಂಜ್ಞೆಗಳ ಒಂದು ಗಣವನ್ನು ಉಣಿಸಿದಾಗ ಲಭಿಸುವ ಮಿದುಳು ಕ್ರಿಯೆಯ ಫಲವೇ ಆತನ ತಾತ್‍ಕ್ಷಣಿಕ ಕ್ರಿಯೆ. ಅಂದರೆ ಮಾನವನ ಮಿದುಳು ತನ್ನ ಆವರಣ ಪ್ರದೇಶಗಳನ್ನು ಅಧ್ಯಯಿಸಿ ಯೋಗ್ಯ ಅಂಶಗಳನ್ನು ಬಟ್ಟಿ ಇಳಿಸಿ ಸಾರಾಂಶವನ್ನು ಸಂಗ್ರಹಿಸಿ ಮಾಹಿತಿಯನ್ನು ಭವಿಷ್ಯದ ಉಪಯೋಗಕ್ಕಾಗಿ ದಾಸ್ತಾನಿಸುವುದೆಂದು ಹೇಳಬಹುದು.

ಇನ್ನೊಂದು ಪ್ರಕ್ರಿಯೆಯತ್ತ ದೃಷ್ಟಿ ಹಾಯಿಸೋಣ : ಗಾಯ ತಂತಾನೇ ಗುಣವಾಗುವಿಕೆ. ಇದು ನಮಗೆ ತೀರ ಸಹಜ ಅನುಭವವಾದ್ದರಿಂದ ದೇಹದೊಳಗೆ ಏನಾಗಿರಬಹುದು ಎನ್ನುವುದನ್ನು ನಾವೂ ಯೋಚಿಸುವುದು ಬಲು ಅಪರೂಪ. ಗಾಯದ ಸ್ವಭಾವ, ಜಾಗ ಮತ್ತು ತೀವ್ರತೆಗಳನ್ನು ಕುರಿತ ಮಾಹಿತಿ ನರಜಾಲದ ಮೂಲಕ ಕೇಂದ್ರೀಯ ನರವ್ಯವಸ್ಥೆಯನ್ನು ತಲುಪುತ್ತದೆ. ಇದರ ಒಂದು ಪ್ರಕ್ರಮೀಕರಣ ಮಿದುಳಿನಲ್ಲಿ ನಡೆಯುವುದೆಂದು ನಾವು ಭಾವಿಸಬಹುದು. ಇದನ್ನು ಆಧರಿಸಿ ರಕ್ತಗರಣೆ ಕಟ್ಟಿಸಲು ಆವಶ್ಯವಾದ ಕಾರಕಗಳನ್ನೂ ಇತರ ಹಾರ್ಮೋನುಗಳನ್ನೂ ಪರಿಚಲನೆಗೆ ಬಿಡುಗಡೆ ಮಾಡಬೇಕೆನ್ನುವ ನಿರ್ಧಾರವನ್ನು ಮಿದುಳಿನಲ್ಲಿ ತಳೆಯಲಾಗುತ್ತದೆ. ತದನುಗುಣವಾಗಿ ಸಂಬಂಧಿಸಿದ ಗ್ರಂಥಿಗಳಿಗೆ ಆಜ್ಞಾನಸಂಜ್ಞೆಗಳನ್ನು ನೀಡಲಾಗುವುದು ; ಮೊದಲು ರಕ್ತಗರಣೆ ಕಾರಕಗಳ ಉತ್ಪಾದನೆ ತರುವಾಯ ಊತಕಗಳ ಮರುಹೊಂದಾಣಿಕೆ ಇಲ್ಲವೇ ಮರುಕಟ್ಟುವಿಕೆ. ಗಾಯ ಗುಣವಾದೊಡನೆ ಮಾಯುವ ಕೆಲಸ ನಿಲ್ಲುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಜೈವಿಕ ಮಾಹಿತಿಯ ಯಾವುದೋ ಸರ್ವೋಪ್ರರೂಪದ (ಸರ್ವೋಟೈಪ್) ಪುನರ್ನಿವಿಷ್ಟ (ಫೀಡ್ ಬ್ಯಾಕ್) ಸಂಭವಿಸುತ್ತಿರುವುದು ಎಂದು ಅರ್ಥ. ಈಗ ಓರ್ವ ಎಂಜಿನಿಯರನ ದೃಷ್ಟಿಯಿಂದ ಮಾತ್ರ ಹೇಳುವುದಾದರೆ, ವ್ಯವಸ್ಥೆಗೆ ಉಣಿಸಿದ ನಿರ್ದೇಶ ಸಂಜ್ಞೆಯ (ರೆಫರೆನ್ಸ್ ಸಿಗ್ನಲ್) ಮೇಲೆ ಆವಲಂಬಿಸಿ ಅಪೇಕ್ಷಿತ ಸ್ಥಾನ ಇಲ್ಲವೇ ಪ್ರಚಲವನ್ನು (ಪ್ಯಾರಾಮೀಟರ್) ಸಾಧಿಸಲು ಕ್ರಿಯೆ ಎಸಗುವ ವ್ಯವಸ್ಥೆಯೇ ಸರ್ವೋನಿಯಂತ್ರಣ. ಪ್ರಾಚಲವನ್ನು ಅಪೇಕ್ಷಿತ ಮೌಲ್ಯದಲ್ಲಿ ಇಡಲು ಬೇಕಾಗುವ ಕೆಲವು ಶುದ್ಧೀಕರಣ ಕ್ರಿಯೆಗಳನ್ನು ನಡೆಸುವುದು ಮಾತ್ರ ಸರ್ವೋಕ್ರಿಯಾ ವಿನ್ಯಾಸ (ಸರ್ವೋ ಮೆಕ್ಯಾನಿಸಮ್) ನಿರ್ವಹಿಸುವ ಪಾತ್ರ. ಓರ್ವ ಚಿಕಿತ್ಸಾಕರನಾದರೂ ಮೂಲತಃ ಮಾಡುವುದು ಇದನ್ನೇ.  ಒಂದು ವ್ಯತ್ಯಾಸ ಮಾತ್ರ : ವೈದ್ಯ ಉಪಯೋಗಿಸುವ ಔಷಧಿಗಳು ಆತ ಆ ಮೊದಲೇ ಬೇರೆ ಬೇರೆ ಪ್ರಯೋಗಾಲಯಗಳಲ್ಲಿ ನಡೆಸಿದಂಥ ಇದೇ ವಿಧದ ವಿಶ್ಲೇಷಕ ಪ್ರಯೋಗಗಳ ಫಲಿತ ; ದೇಹಾವಾದರೋ ಗಾಯಗೊಂಡ ಬಳಿಕ ಗುಣಕಾರಕಗಳನ್ನು ತಾನೇ ಉತ್ಪಾದಿಸಿ ಸಮಸ್ಯೆಯನ್ನು ಎದುರಿಸುತ್ತದೆ ಮತ್ತು ಮಾಯುವಿಕೆ ಮುಂದುವರಿದಂತೆ ಕ್ರಮೇಣ ಗುಣಕಾರಿ ಕ್ರಿಯೆಯನ್ನು ಕಡಿಮೆ ಮಾಡುತ್ತದೆ.
ಗಣಕದ ನೆರವಿನಿಂದ ರೋಗನಿದಾನ : ವೈದ್ಯಕೀಯ ರೋಗನಿದಾನದಲ್ಲಿ ನಾವು ಸಾಧಾರಣವಾಗಿ ಒಂದೆರಡು ಶಾರೀರಿಕ ಪ್ರಾಚಲಗಳು ಸಾಮಾನ್ಯ ಮೌಲ್ಯಗಳಿಂದ ಭಿನ್ನವಾಗಿರಬಹುದಾದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ತನ್ನ ರೋಗನಿರ್ಣಾಯಕ ಪರೀಕ್ಷಣೆಗಳನ್ನು ಖಚಿತಗೊಳಿಸಲು ವೈದ್ಯ ಮಾದರಿಯಾಗಿ ಅಳೆಯಬಹುದಾದ ಭೌತ ಪ್ರಾಚಲಗಳು ಯಾವುವು? ಇವುಗಳಲ್ಲಿ ನಿಶ್ಚಿತವಾಗಿ ಈ ಮುಂದಿನವು ಇರುವುವು; ರೋಗಿಯ ಹೃದಯಸ್ಪಂದನ, ಉಷ್ಣತಾಮಾನ, ರಕ್ತದ ಒತ್ತಡ ಮುಂತಾದವು ಶರೀರವಿಜ್ಞಾನದ ಪರೀಕ್ಷೆಯಲ್ಲಿ ; ರಕ್ತ, ಮೂತ್ರ, ಮಲ, ಕಫ ಹಾಗೂ ರೋಗಿಯ ಉಸಿರು ಮುಂತಾದವು ರಾಸಾಯನಿಕ ವಿಶ್ಲೇಷಣೆಯಲ್ಲಿ ; ವಿದ್ಯುದ್ ಹೃದಯ ಸ್ಪಂದನಾಲೆಖ, ಮಿದುಳಿನ ವಿದ್ಯುದಾಲೇಕ, ಸ್ನಾಯು ವಿದ್ಯುದಾಲೇಖ ಹಾಗೂ ಇನ್ನಿತರ ಜೀವವಿದ್ಯುತ್ ಸಂಜ್ಞೆಗಳು ಹಾಗೂ ಅವುಗಳ ಮಾದರಿಗಳ ಭೌತ ವಿಶ್ಲೇಷಣೆಯಲ್ಲಿ ; ಹಾಗೂ ಕೊನೆಯದಾಗಿ ರೋಗಿಯ ಮಾನಸಿಕ ಸ್ಥಿತಿಯನ್ನು ಅರಿಯಲು ಒಂದು ಪ್ರಶ್ನಾವಳಿ ಮನೋವೈಜ್ಞಾನಿಕ ವಿಶ್ಲೇಷಣೆಯಲ್ಲಿ.

ಭೌತವಿಜ್ಞಾನಿಯ ದೃಷ್ಟಿಯಲ್ಲಿ ಈ ಅಸ್ಥಿರ ಪ್ರಾಚಲಗಳ ವಿಶ್ಲೇಷಣೆಯೆಂದರೆ ಬಹುಪ್ರಾಚಲ ಚರಗಳ ಅಧ್ಯಯನ. ಬಹು ಪ್ರಾಚಲ ವಿಶ್ಲೇಷಣೆಯಲ್ಲಿ ಉಪಯುಕ್ತ ಭೌತತಂತ್ರಗಳನ್ನು ಶರೀರ ವಿಜ್ಞಾನದ ಪರೀಕ್ಷಣೆಗೆ ಅನ್ವಯಿಸುವುದು ಎಷ್ಟು ಸಮಂಜಸ? ಇದನ್ನು ಉತ್ತರಿಸಲು ಜೀವಿ ಹಾಗೂ ಪರಿಸರದ ಸಂಬಂಧವನ್ನು ನೋಡೋಣ. ಶರೀರದ ಸ್ಥಿರಸ್ಥಿತಿಯ ತತ್ತ್ವ (ಅಂದರೆ ಶರೀರದ ಆಂತರಿಕ ಪರಿಸರದ ಸ್ಥಾಯಿತ್ತ ತತ್ತ್ವ). ಮೊತ್ತ ಮೊದಲಿಗೆ 1860 ದಶಕದಲ್ಲಿ ಶರೀರವಿಜ್ಞಾನಿ ಕ್ಲಾಡೆ ಬರ್ನಾರ್ಡ್ ಎಂಬಾತನಿಂದ ಪ್ರತಿಪಾದಿಸಲ್ಪಟ್ಟಿತು.  ಈ ತತ್ತ್ವಕ್ಕೆ ಅನುಗುಣವಾಗಿ ಶರೀರ ಸ್ಥಿರ ಅಂತರಿಕ ಪರಿಸರವನ್ನು ಇಟ್ಟುಕೊಳ್ಳುತ್ತದೆ.  ಇಲ್ಲವಾದರೆ ಅನಾರೋಗ್ಯ ಫಲಿಸುತ್ತದೆ. ಈ ತತ್ತ್ವ ಶರೀರ ವ್ಯಾಪಾರಗಳ ತಿದ್ದುತಂತ್ರದ ಅಸ್ತಿತ್ವವನ್ನು ಸೂಚಿಸುತ್ತದೆ ; ಈ ಮೊದಲೇ ಹೇಳಿದಂತೆ ಇದು ಸರ್ವೋನಿಯಂತ್ರಿತ ಪುನರ್ನಿವಿಷ್ಟ ವಿಧಾನವನ್ನು ಹೋಲುತ್ತದೆ. ಒಬ್ಬ ಸಂಖ್ಯಾಕಲನ ಶಾಸ್ತ್ರಜ್ಞನ ದೃಷ್ಟಿಯಲ್ಲಿ ಆಂತರಿಕ ಪರಿಸರದ ಸ್ಥಿರತೆ ಭೌತರಾಸಾಯನಿಕ ಸಮತೋಲನ ಸ್ರಬ್ಧ ಸ್ಥಿತಿಯನ್ನು ಹೋಲುತ್ತದೆ.  ಸ್ಥೂಲವಾಗಿ ಹೇಳುವುದಾದರೆ ನಾವು ಕಾಣುವ ಕ್ರಿಯೆಗಳು ಮೂಲತಃ  ಅರೆಸ್ತಬ್ಧವಾಗಿವೆ.  ಆದ್ದರಿಂದ ಹೆಚ್ಚಾಗಿ ಸಂಖ್ಯಾಕಲನಾತ್ಮಕ ಪದ್ಧತಿಗಳನ್ನು ವೈದ್ಯಕೀಯ ಪರೀಕ್ಷೆಗಳಿಗೂ ಅನ್ವಯಿಸಬಹುದು. ಶಾರೀರಿಕ ಚರಗಳನ್ನು ಪ್ರಾಚಲ ಸಹಸಂಬಂಧಿಸಿದರೆ (ಆರೋಗ್ಯ ಹಾಗೂ ಅನಾರೋಗ್ಯ ಸ್ಥಿತಿಗಳಲ್ಲಿ) ಒಂಟಿ ಪ್ರಾಚಲವನ್ನು ಅಭ್ಯಸಿಸಿದ್ದಕ್ಕಿಂತ ಹೆಚ್ಚಿನ ರೋಗನಿರ್ಣಾಯಕ ಸಂಗತಿಗಳು ಬೆಳಕಿಗೆ ಬರುವುವು. ಹೀಗೆ ಮಾನವನಲ್ಲಿಯ ಅನಾರೋಗ್ಯಸ್ಥಿತಿಗಳು ತುಲನಾತ್ಮಕ ಪರೀಕ್ಷೆಗಳಿಗೆ ಒಳಗಾಗುತ್ತವೆ. ಮೂಲಭೂತ ವಿಧಾನಗಳನ್ನು ಅಭ್ಯಸಿಸಿಸುವುದರಿಂದ ವ್ಯಾಧಿ ವೈದ್ಯಕೀಯವಾಗಿ ಮೈದೋರುವ ಮುನ್ನವೇ ಅದನ್ನು ಪತ್ತೆ ಮಾಡಬಹುದು. 
ಆಗ ಬೇನೆಯ ಸೂಚನೆಯನ್ನು ಊಹಿಸಿ ಅದನ್ನು ತಡೆಗಟ್ಟುವ ಸಾಧ್ಯತೆ ಇದೆ. ಈ ವೇಳೆಗೆ ಉಪಕರಣತಜ್ಞರು ಕಾಲಿರಿಸಿ ಸಾಮಾನ್ಯ ಜನತೆಯನ್ನು ಕುಷ್ಠರೋಗ ಅಥವಾ ಹೃದ್ರೋಗ ಮುಂತಾದ ದೋಷಗಳಿಗೆ ಉಪಕರಣಗಳಿಂದ ಪರೀಕ್ಷಿಸಬಹುದು. ಸಂಕ್ಷಿಪ್ತವಾಗಿ ಇದು ಭವಿಷ್ಯ ಕಥನಾತ್ಮಕ ರೋಗನಿರ್ಣಯ. ಭವಿಷ್ಯದಲ್ಲಿ ಗಣಕತಂತ್ರಗಳನ್ನು ಹೆಚ್ಚುಹೆಚ್ಚಾಗಿ ಈ ಕೆಳಗಿನ ವಿಷಯಗಳಲ್ಲಿ ಉಪಯೋಗಿಸುವ ಸಾಧ್ಯತೆ ಉಂಟೆಂದು ನಾವು ನಿರೀಕ್ಷಿಸಬಹುದು ;

	1 ಚಯಾಪಚಯಾತ್ಮಕ ಹಾಗೂ ಇತರ ರಾಸಾಯನಿಕ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳು.

	2 ವೀಕ್ಷಿತ ವಿದ್ಯುತ್ ಪ್ರರೂಪಗಳ ವಿಶ್ಲೇಷಣೆ

	3 ರಕ್ತದಲ್ಲಿಯ ಭಿನ್ನ ಭಿನ್ನ ವಸ್ತುಗಳಲ್ಲಿ ಸಂಬಂಧವನ್ನು ಗುರುತಿಸುವುದು.

	4 ರೋಗಿಯ ಪರೀಕ್ಷಣೆ ಅಥವಾ ಪ್ರಶ್ನೋತ್ತರಗಳಿಂದ ದೊರೆತ ರೋಗ ನಿರ್ಣಾಯಕ ಮಾಹಿತಿಯ ಸಂಗ್ರಹ ಹಾಗೂ ವಿಶ್ಲೇಷಣೆ.

	5 ಕಾರಣ ಮತ್ತು ದೀರ್ಘಕಾಲಾನಂತರ ಉಂಟಾಗುವ ಪರಿಣಾಮಗಳ ಸಂಬಂಧವನ್ನು ದಾಖಲೆಗಳಿಂದ ಉದ್ಧರಿಸುವುದು ; ಮುಂತಾದವು.

	ಈ ಅನ್ವಯ ತೆರಪನ್ನು ಭರ್ತಿ ಮಾಡುವುದೇ ಸಮಸ್ಯೆ . ಒಂದೆಡೆ ಗಣಕದ ವಿಭವತೆಗಳನ್ನು ಅರಿತಿರುವ ಗಣಕವಿಜ್ಞಾನಿಗಳಿದ್ದರೂ ಅವರಲ್ಲೂ ಬಹುಸಂಖ್ಯಾತರಿಗೆ ಗಣಕವನ್ನು ಬಳಸಬಹುದಾದ ವೈದೈಕೀಯ ಶಾಸ್ತ್ರದಲ್ಲಿ ಜ್ಞಾನ ಸಾಲದು. ಇನ್ನೊಂದೆಡೆ ವೈದ್ಯರು ಹಾಗೂ ವೈದ್ಯಕೀಯ ಸಂಶೋಧಕರಿಗೆ ವೈದ್ಯಸಾಸ್ತ್ರದಲ್ಲಿ ಗಣಕವಿಜ್ಞಾನ ಹಾಗೂ ಪರಿಮಾಣಾತ್ಮಕ ಮೌಲ್ಯಮಾನ ಪದ್ಧತಿಗಳ ಅಪಾರ ಅನ್ವಯದ ಜ್ಞಾನದ ಅಭಾವವಿದೆ. ಈ ಎರಡೂ ಕ್ಷೇತ್ರಗಳ ಯೋಗ್ಯ ಬೆಸುಗೆ ಫಲಪ್ರದವಾಗಬಲ್ಲದು.

	ಕೆಲವು ಜೀವಾಧಾರಕ ವ್ಯವಸ್ಥೆಗಳು: ಮುಂದುವರಿದ ರಾಷ್ಟ್ರಗಳು ಅನೇಕ ವರ್ಷಗಳಿಂದ ಮೂತ್ರಪಿಂಡಯಂತ್ರ, ಹೃದಯ-ಪುಪ್ಪುಸ ಯಂತ್ರ, ಹೃದಯ ಗತಿಕಾರಕಗಳು ಮುಂತಾದ ಯಂತ್ರಗಳನ್ನು ಬಳಸುತ್ತ ಬಂದಿವೆ. ಕೇಡಿಗೊಳಗಾದ ಮೂತ್ರಪಿಂಡವುಳ್ಳ ರೋಗಿ ನಿಯತಕಾಲಿಕ ರಕ್ತಶುದ್ಧೀಕರಣ ಚಿಕಿತ್ಸೆಗೆ ಒಳಗಾಗುತ್ತಾನೆ. ಈ ಉಪಕರಣಗಳು ಹೇಗೆ ನಡೆಯುತ್ತವೆ? ಇದನ್ನು ಅರಿಯಲು ಕೆಲವು ಜೀವಾಧಾರಕ ಯಂತ್ರಗಳನ್ನು ಪರಿಶೀಲಿಸೋಣ. ಮೂತ್ರ ಪಿಂಡದ ಸಂಚಾರದಲ್ಲಿ ರಕ್ತ ರಾಸಾಯನಿಕ ಪ್ರಕ್ರಮಗಳಿಗೆ ಒಳಗಾಗುತ್ತದೆ. ಸೋಸುವುದು, ಆಸ್ಮಾಸಿಸ್, ಅಪೋಹನ (ಡಯಾಲಿಸಿಸ್) ಹಾಗೂ ಇನ್ನಿತರ ಪಟು, ಸ್ಥಾನಾಂತರ ಕ್ರಿಯೆಗಳು ಒಂದೆಡೆಯಲ್ಲಿಯೂ ಲವಣ, ಆಮ್ಲ ಮುಂತಾದ ಹಾನಿಕಾರಕ ವಿಸರ್ಜಿತಗಳನ್ನು ತೆಗೆದುಹಾಕಿ, ನೀರು, ಉಪ್ಪು, ಪ್ರೋಟೀನು ಮುಂತಾದ ವಸ್ತುಗಳ ಉಳಿತಾಯ ಕ್ರಿಯೆಗಳು ಇನ್ನೊಂದು ಕಡೆಯಲ್ಲಿಯೂ ನಡೆಯುತ್ತವೆ. ಈ ವಿಧಾನಗಳು ಸುಲಭವಾಗಿ ಕಾಣುತ್ತವೆ ನಿಜ. ಆದರೆ ರಾಸಾಯನಿಕ ಎಂಜಿನಿಯರನ ಪ್ರಯೋಗಶಾಲೆಯಲ್ಲಿ ಇಂದಿನವರೆಗೂ ಮೂತ್ರ ಇಂಡದ ಕಾರ್ಯವನ್ನು ಅನುಕರಿಸಲು ಸಾಧ್ಯವಿಲ್ಲದಷ್ಟು ಅದು ಕ್ಲಿಷ್ಟವಾಗಿ ತೋರಿ ಬಂದಿದೆ. ಮೂತ್ರಪಿಂಡದ ಸ್ವಾಭಾವಿಕ ಕ್ರಿಯೆಗಳು ನಡೆಯದಿದ್ದಾಗ ರಕ್ತವನ್ನು ರಾಸಾಯನಿಕ ಪ್ರಕ್ರಮಗಳಿಗೆ ಒಳಪಡಿಸಲು ಶರೀರದಿಂದ ಹೊರಕ್ಕೆ ತರಬೇಕಾಗುತ್ತದೆ. ಪ್ಲಾಸ್ಟಿಕ್ ವಸ್ತುಗಳ ಸಂಪರ್ಕದಲ್ಲಿ ರಕ್ತವನ್ನು ಕೆಲಕಾಲ ಕೆಡಲಾರದಂತೆ ಇರಿಸಬಹುದಾದ್ದರಿಂದ ಇದು ಸಾಧ್ಯ. ಇದರ ಮೇಲೆ ಮೂತ್ರಪಿಂಡ ಹಾಗೂ ಗುಂಡಿಗೆ ಪುಪ್ಫುಸ ಯಂತ್ರಗಳ ತತ್ತ್ವಗಳು ಆಧರಿಸಿವೆ. ಸಂಕ್ಷಿಪ್ತವಾಗಿ ಮೂತ್ರಪಿಂಡಯಂತ್ರ ಒಂದು ಅಪೋಹಕ ಪೊರೆ. ಅದರ ಒಂದು ಬದಿಗೆ ರಕ್ತ ಹಾಗೂ ಇನ್ನೊಂದು ಬದಿಗೆ ಒಂದು ಕಾಪು ತಡೆ ದ್ರಾವಣ ಉಂಟು. ಆಗಾಗ ಸಕಾಲದಲ್ಲಿ ಉಪಯೋಗಿಸಿದರೆ ಈ ಯಂತ್ರದಿಂದ ರೋಗಿ ಸರಿಸುಮಾರು ಎಲ್ಲ ಜನರಂತೆಯೇ ಜೀವನ ನಡೆಸಲು ಅನುಕೂಲವಾಗುವುದು. 

ಅದರ ಗುಂಡಿಗೆ ಪುಪ್ಫುಸ ಯಂತ್ರ ಕೆಲವೇ ಗಂಟೆ ಕಾಲ ಮಾತ್ರ ವ್ಯಕ್ತಿಯ ಜೀವವನ್ನು ಹಿಡಿದಿಡಲು ನೆರವಾಗಬಲ್ಲುದು. ಇದರ ಮುಖ್ಯ ಕಾರ್ಯವೆಂದರೆ ಆಮ್ಲಜನಕೀರಣವನ್ನು ನಡೆಯಿಸುವುದು-ಅಂದರೆ ರಕ್ತದ ಆಮ್ಲಜನಕಾಂಶವನ್ನು ಹೆಚ್ಚಿಸುವುದು. ಪುಪ್ಫುಸಗಳು ಅತ್ಯಂತ ಕುಶಲ ಸ್ವಾಭಾವಿಕ ಆಮ್ಲಜನಕೀಕಾರಕಗಳು ; ವಾಯುಚೀಲ ಕ್ಷೇತ್ರದ ಪೇರಿ ಮಡಿಚಿದ ಮೇಲ್ಮೈ ಒಂದು ಟೆನ್ನಿಸ್ ಮೈದಾನವನ್ನೇ ಆವರಿಸಬಹುದು. ರಕ್ತವು ತಿರುಗುವ ಪೀಪಾಯಿಗಳಲ್ಲಿ ಅಥವಾ ಪ್ಲಾಸ್ಟಿಕ್ ತಟ್ಟೆಗಳ ವ್ಯೂಹವೊಂದರ ಮೇಲೆ ಹರಿದು ಆಮ್ಲಜನಕದೊಂದಿಗೆ ಸಂಯೋಜಿಸುವಂತೆ ಗುಂಡಿಗೆ-ಫುಪ್ಫುಸ ಯಂತ್ರದ ಅತಿ ದೊಡ್ಡ ಪ್ರಯೋಜನ ತೆರೆದ ಗುಂಡಿಗೆ ಶಸ್ತ್ರಚಿಕಿತ್ಸೆಯಲ್ಲಿದೆ-ಇಲ್ಲಿ ವೈದ್ಯ ಗುಂಡಿಗೆಯನ್ನು ಬದಿಗಿಟ್ಟು ಶಸ್ತ್ರಚಿಕಿತ್ಸೆ ನಡೆಸುವನು. ಆದರೆ ಮೂತ್ರಪಿಂಡಯಂತ್ರದಂತೆ ಇದು ಎಲ್ಲರಿಗೂ ಉಪಯುಕ್ತವಲ್ಲ. ದೀರ್ಘಾವಧಿ ಹೃದ್ರೋಗಿಗೆ ಇದು ನಿರುಪಯುಕ್ತ. ಅಲ್ಲದೆ ಈಗ ದೊರೆಯುವ ಗುಂಡಿಗೆ-ಪುಪ್ಫುಸ ಯಂತ್ರಗಳು ಒರಟು ಹಾಗೂ ವಿಕೃತವಾಗಿವೆ ; ಅನಿಲ -ವಿನಿಮಯ ಭಾಗದ ಒರಟು ಮೇಲ್ಮೈ ಕೆಂಪು ರಕ್ತಕಣಗಳನ್ನು ನಶಿಸಿ ಹೆಮಾಲಿಸಿಸ್ ಉಂಟುಮಾಡಬಹುದು. 
ಮುಚ್ಚುಮಂಡಲ ಸಾಧನೆಗಳಿಂದ (ಇವು ಇನ್ನೂ ಬೆಳವಣಿಗೆಯ ಮೊದಲ ಹಂತದಲ್ಲಿವೆ) ಒಂದು ವಿಶೇಷ ಸುಧಾರಣೆಯಾಗಬಹುದು. ಇವು ಅನಿಲ ವಿನಿಮಯಕ್ಕೆ ಸಿಲಿಕಾನ್ ರಬ್ಬರಿನ ಪೊರೆಗಳನ್ನು  ಉಪಯೋಗಿಸುತ್ತವೆ. ಮೂತ್ರಪಿಂಡ ಹಾಗೂ ಗುಂಡಿಗೆ-ಫುಪ್ಫುಸ ಯಂತ್ರಗಳೇನಾದರೂ ಇಂದು ಯಶಸ್ಸುಗಳಿಸಿದ್ದರೆ ಅದರ ಕೀರ್ತಿ ಎಂಜಿನಿಯರುಗಳಿಗಿಂತ ವೈದ್ಯರಿಗೇ ಹೆಚ್ಚು ಸಲ್ಲಬೇಕು.

	ಅಲ್ಲದೆ ಇನ್ನೂ ಕೆಲವು ಸರಳ ಕಾರ್ಯಗಳಿವೆ. ಮಾನವನ ಜೀವನದುದ್ದಕ್ಕೂ ಗುಂಡಿಗೆ ಪ್ರೌಢನ ಶರೀರದಲ್ಲಿ ಮಿನಿಟೊಂದಕ್ಕೆ 72 ಸಲ ರಕ್ತ ಸಂಚಾರ ಆಗುವಂತೆ ಕೆಲಸ ಮಾಡುತ್ತದೆ. ಗುಂಡಿಗೆ ಸ್ನಾಯುಗಳು ಈ ಕಾರ್ಯಕ್ಕೆ ನಿರ್ದಿಷ್ಟವಾಗಿಯೇ ಇವೆ. ಎಲ್ಲ ಸ್ನಾಯುಕೋಶಗಳಿಗೂ ಸಂಕೋಚನಕ್ಕೆ ಬಾಹ್ಯ ವಿದ್ಯುತ್ ರಾಸಾಯನಿಕ ಪ್ರಚೋದನೆ ಬೇಕು. ಬಾಹ್ಯ ಪ್ರಚೋದನೆಯಿಲ್ಲದೆ ತಂತಾನೇ ಲಯಬದ್ಧವಾಗಿ ಹೃದಯಸ್ಪಂದವನ್ನು ನಡೆಸಿಕೊಂಡು ಹೋಗಬಲ್ಲ ಆಂತರಿಕ ಗತಿಕಾರಕವೆಂಬ ಭಾಗ(ಬಲ ಹೃತ್ಕರ್ಣದಲ್ಲಿರುವ ಸಂಧಿಸ್ಥಾನ) ಉಂಟು. ಈ ಸ್ವಾಭಾವಿಕ ಗತಿಕಾರಕ ಯಾವುದೋ ಕಾರಣಕ್ಕೆ ಕಾರ್ಯವಿಮುಖವಾದರೆ, ಹೃದಯಸ್ಪಂದನವನ್ನು ನಡೆಸಲು ಎಲೆಕ್ಟ್ರಾನಿಕ್ ಗತಿಕಾರಕವನ್ನು ಉಪಯೋಗಿಸಬಹುದು. ಇದರ ಗಾತ್ರ ಒಂದು ಕಡ್ಡಿ ಪೆಟ್ಟಿಗೆಯಷ್ಟು ಇದೆ. ಇದು ವಿದ್ಯುತ್ ಮಿಡಿತಗಳನ್ನು (2 ರಿಂದ 5 ವೋಲ್ಟು ಪಾರದ ಹಾಗೂ 2 ಮಿಲಿಸೆಕೆಂಡು ಅವಧಿಯ) ಗುಂಡಿಗೆಯ  ಹೊರಗೆ ಪಕ್ಕೆಲುಬುಗಳ ಕೆಳಗೆ ಹೊಲಿಯಲಾದ ಇಲ್ಲವೆ ಹೃದಯದೊಳಗೆ ನಳಿಕೆಯೊಂದಿಗೆ ಸೇರಿಸಿದ ವಿದ್ಯುದ್ಧ್ರುವಗಳಿಗೆ ನೀಡುವುದು. ವಿದ್ಯುತ್ಕೋಶ ಶಕ್ತಿಗುಂದಿ ಮತ್ತೊಂದು ವಿದ್ಯುತ್ಕೋಶವನ್ನು ಪ್ರತಿಸ್ಥಾಪಿಸುವ ಮುನ್ನ ಎಲೆಕ್ಟ್ರಾನಿಕ್ ಗತಿಕಾರಕ ಅನೇಕ ವರ್ಷಗಳ ವರೆಗೆ ನಡೆಯಬೇಕು. ಕೆಲ ಮಾದರಿಗಳಲ್ಲಿ ಬಾಹ್ಯ ಉತ್ಪಾದಕಗಳನ್ನು ಉಪಯೋಗಿಸಿ ವಿದ್ಯುತ್ ಶಕ್ತಿಯ್ನನು ಶರೀರದಲ್ಲಿಡಲ್ಪಟ್ಟ ತಂತಿಸುರಳಿಯಲ್ಲಿ ಚೋದನೆಯಿಂದ ಹೊಂದಿಸಿ ಉಪಯೋಗಿಸಲಾಗುತ್ತದೆ. ಆದರೂ ವಿದ್ಯುತ್ಕೋಶದ ಆಯಷ್ಯ ಕೆಲವೇ ವಾರಗಳಿರುವುದರಿಂದ ಅದನ್ನು ಅಗಾಗ ಪುನಃಪರಿಪೂರಣ ಮಾಡಬೇಕಾಗುವುದು. ಇತ್ತೀಚಿನ ಬದಲಾವಣೆಯೆಂದರೆ ಅಪೇಕ್ಷಾಗತಿಕಾರಕ; ಇದು ಹೃದಯವೀಕ್ಷಣೆ ಮಾಡುತ್ತ ಅವಶ್ಯವಿದ್ದಾಗ ಮಾತ್ರ ಮಿಡಿತವೊಂದನ್ನು ನೀಡುತ್ತದೆ. ಅಜೀವಪರ್ಯಂತ ಕೆಲಸಮಾಡಲು ಇತ್ತೀಚೆಗೆ ಬ್ರಿಟಿಷ್ ಪರಮಾಣು ವಿಜ್ಞಾನಿಗಳು ನ್ಯೂಕ್ಲಿಯರ್ (ಪ್ಲೂಟೋನಿಯಮ್-238) ವಿದ್ಯುತ್ಕೋಶವೊಂದನ್ನು ರಚಿಸಿದ್ದಾರೆ.

	ಮೂಳೆಕೀಲುಗಳ ಪ್ರತಿಷ್ಠಾಪನೆಯ ಸಮಸ್ಯೆಗಳು : ಕಂಕಾಲವು ದೇಹಕ್ಕೆ ಯಾಂತ್ರಿಕ ಆಧಾರವನ್ನು ಕೊಟ್ಟು ಅದು ವಿವಿಧ ಭಂಗಿಗಳನ್ನು ತಳೆಯಲು ಅನುಕೂಲ ಮಾಡಿಕೊಡುತ್ತದೆ. ಪಂಜರದ ಸ್ನಾಯುಗಳು-ಇವು ಎಲುಬುಗಳಿಗೆ ಸ್ನಾಯುಬಂಧಗಳಿಂದ ಜೋಡಿಸಲ್ಪಟ್ಟಿವೆ-ಅವಯವಗಳ ಸಂಧಿಬಂಧನಗಳನ್ನು ಉಂಟುಮಾಡುತ್ತವೆ. ಎಲುಬಿಗೆ ನಿರ್ದಿಷ್ಟ ಅಕ್ಷಗಳಿವೆ ಮತ್ತು ಅದರ ಸಂಯೋಜನೆಯಲ್ಲಿ ಅದು ವಿಷಮಾಂಗೀಯವಾಗಿದೆ. ಅದ್ದರಿಂದ ಕೃತಕ ಸೊಂಟಕೀಲು ಆಲೇಖ್ಯಗಾರ ಘರ್ಷಣಾತ್ಮಕ ಸವೆತ ಹಾಗೂ ಚಲನಸೌಲಭ್ಯವನ್ನು ಉಂಟು ಮಾಡುವ ಸಜೀವ ಎಲುಬಿಗೆ ಕೃತ್ರಿಮ ಎಲುಬಿನ ಜೋಡಣೆ ಹಾಗೂ ಇಂಥ ಕೀಲಿನ ಯಾಂತ್ರಿಕ ಸ್ಥಿರತೆ ಮುಂತಾದ ಎಂಜಿನಿಯರಿಂಗ್ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ವಾಭಾವಿಕ ಕೀಲುಗಳಲ್ಲಿ ಸೈನೋವಿಯಲ್ ತರಲ ಎಂಬ ಒಂದು ಅಂಟುದ್ರವ ಸಂಧಿಬಂಧನವು ಘರ್ಷಣೆಯಿಲ್ಲದೆ ಸಲೀಸಾಗಿರುವಂತೆ ನೆರವಾಗುತ್ತದೆ. ಸೈನೋವಿಯಲ್ ತರಲದ ಸರಿಸಮಾನ ಅಂಟು ದ್ರವ ಕೃತಕವಾಗಿ ಇನ್ನೂ ಸಿದ್ಧವಾಗಬೇಕಷ್ಟೆ.  ತತ್ಪರಿಣಾಮವಾಗಿ ಸ್ವಚಲನ ಸೌಲಭ್ಯವಿರುವ ಅಥವಾ ದೇಹದ್ರವಗಳಿಂದ ಚಲನ ಸೌಲಭ್ಯ ಉಂಟಾಗುವ ಪ್ಲಾಸ್ಟಿಕ್ ಅಥವಾ ಮಿಶ್ರಲೋಹಗಳನ್ನು ಇದಕ್ಕಾಗಿ ಉಪಯೋಗಿಸಲಾಗುತ್ತದೆ. ಬ್ಯಾಲೆ ನೃತ್ಯಗಾರ ಪ್ರದರ್ಶಿಸುವ ನೃತ್ಯಭಂಗಿಗಳಲ್ಲಿ ಸೊಂಟದ ಉರುಳು ಕೀಲು ಭಿನ್ನಭಿನ್ನ ಭಾರಾವಸ್ಥೆಗಳನ್ನು ಹೇಗೆ ನಿರ್ವಹಿಸುತ್ತದೆಂಬ ವಿಷಯ ಇನ್ನೂ ಸರಿಯಾಗಿ ತಿಳಿದಿಲ್ಲ. ಇಂದಿನ ಮಿತಿಗೆ, ಈ ಕೀಲು ಬಹಳ ಚೆನ್ನಾಗಿ ರಚಿಸಲ್ಪಟ್ಟಿದ್ದು, ಅದರ ಚಲನಸೌಲಭ್ಯ ವ್ಯವಸ್ಥೆ ಭಿನ್ನಭಿನ್ನ ಭಾರಾವಸ್ಥೆಗಳನ್ನು ತಡೆಯುವಂತೆ ಉತೃಷ್ಟವಾಗಿದೆ ಎಂದು ಮತ್ರ ಹೇಳಬಹುದು. ನ್ಯೂನತಾ ಪೂರಕ ಕೃತಕ ಅವಯವಗಳ ತಯಾರಿಕೆ ಹಾಗೂ ನಕ್ಷೆಗಾರಿಕೆಯಂಥ ಜೀವ ಯಂತ್ರ ಶಾಸ್ತ್ರದ ಕೆಲಸ ಭಾರತದಲ್ಲಿ ಯಾವ ಪ್ರಯೋಗಶಾಲೆಯಲ್ಲಿಯೂ ಸತತವಾಗಿ ಮುಂದುವರಿಸಲ್ಪಟ್ಟಿಲ್ಲ. ತೀವ್ರ ಔದ್ಯೋಗಿಕರಣದಿಂದ ಮಾನವ ಇಂದ್ರಿಯಗಳನ್ನು ಕಳೆದುಕೊಳ್ಳುವ ಸಂಭಾವ್ಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಭಾರತವೇನೂ ಇದಕ್ಕೆ ಅಪವಾದವಲ್ಲ. ಈ ದಿಶೆಯಲ್ಲಿ ನಿಶ್ಚಿತ ಪ್ರಯತ್ನ ಬೇಕೇಬೇಕು.

	ವೈದ್ಯಶಾಸ್ತ್ರದಲ್ಲಿ ಅತಿಶಬ್ದ ತಂತ್ರ : ಕಳೆದ ದಶಕದ ಸುಮಾರಿಗೆ ವೈದ್ಯಶಾಸ್ತ್ರದಲ್ಲಿ ಅತಿಶಬ್ದ ತಂತ್ರ ಪ್ರವೇಶಿಸಿದೆ. ದೇಹದ ಮೂಲಕ ಅತಿಶಬ್ದ (20 ಕಿಲೋಸೈಕಲ್ಲಿಗೂ ಮಿಕ್ಕಿ ಆವರ್ತಾಂಕವಿರುವ ಶಬ್ದ) ಚಲಿಸುವ ಗುಣಧರ್ಮದ ಮೇಲೆ ಈ ಅನ್ವಯ ಆಧರಿಸಿದೆ. ಚಲನಕಾಲದಲ್ಲಿ ಮಾಧ್ಯಮ ಬದಲಾಯಿಸಿದರೆ ಅದು ಪ್ರತಿಧ್ವನಿಸಲ್ಪಡುತ್ತದೆ. ಈ ಪ್ರತಿಧ್ವನಿಯನ್ನು ವೈದ್ಯಕೀಯವಾಗಿ ಅಭ್ಯಸಿಸಿ ಅರಿಯಬಹುದು. ಚಲನೆಯಲ್ಲಿರುವ ಗುರಿಯನ್ನು ಅತಿಶಬ್ದ ಮುಟ್ಟಿದಾಗ ಚದರಿದ ಅತಿಶಬ್ದ ಗುರಿಯ ವೇಗವನ್ನು ಕುರಿತ ಜ್ಞಾನವನ್ನು ತನ್ನೊಡನೆ ತರುತ್ತದೆ. (ಗುಂಡಿಗೆ ಅಥವಾ ರಕ್ತನಾಳಗಳಲ್ಲಿ ಚಲಿಸುವ ರಕ್ತಕಣಗಳು ಅಥವಾ ಗುಂಡಿಗೆಯಲ್ಲಿ ಚಲನೆಯಲ್ಲಿರುವ ದ್ವಿಪಕ್ಷ ಹಾಗೂ ತ್ರಿಪಕ್ಷಕವಾಟಗಳಲ್ಲಿ ಈ ರೀತಿ ಇದೆ.) ಭೌತಶಾಸ್ತ್ರದಲ್ಲಿ ಇದಕ್ಕೆ ಡಾಪ್ಲರ್ ಪರಿಣಾಮ ಎಂದು ಹೆಸರು. ಅತಿಶಬ್ದಕ್ಕೆ ವೈದಕ್ಯಕೀಯ ಕ್ಷೇತ್ರದಲ್ಲಿ ಮಿದುಳಿನ ಪ್ರತಿಧ್ವನ್ಯಾಲೇಖ (ವಿಕಾರಗಳಿಗಾಗಿ ಮಿದುಳಿನ ಪರೀಕ್ಷಣೆ) ಹೃದಯ ಪ್ರಧ್ವನ್ಯಾದರ್ಶಕ, ಭ್ರೂಣಪರೀಕ್ಷಕ, ದ್ವಿಪಕ್ಷಕವಾಟ ಹ್ರಸ್ವತೆಯ ಪರೀಕ್ಷೆಗಳಲ್ಲಿ ಅತೀತ ಶಬ್ದ ತಂತ್ರ, ಸ್ವದಸ್ತೂರು ಅತಿಶಬ್ದ ತಂತ್ರ ಮುಂತಾದ ಅನೇಕ ಅನ್ವಿತ ಪ್ರಯೋಜನಗಳಿವೆ. ಸಂಕ್ಷಿಪ್ತತೆಗಾಗಿ ನಾವು ಹೃದ್ರೋಗಪರೀಕ್ಷೆಯಲ್ಲಿ ಅತಿಶಬ್ದದ ಪ್ರಯೋಜನವನ್ನು ಮಾತ್ರ ನೋಡೋಣ.

	ಹೃದ್ರೋಗ ಪರೀಕ್ಷೆಯಲ್ಲಿ ಎರಡು ವಿಧದ ಅತಿಶಬ್ದ ರೋಗನಿರ್ಣಾಯಕ ತಂತ್ರಗಳನ್ನು ಬಳಸಬಹುದು : 1 ಹೃದಯದ ಫಲಿತಗಳನ್ನು ಅಭ್ಯಸಿಸಿ ಶಕ್ತಿಯ ಮೌಲ್ಯಮಾಪನೆ; 2 ದ್ವಿಪಕ್ಷ ಕವಾಟ ಹೃಸ್ವತೆಯ ಪರೀಕ್ಷಣೆ. ಮೊದಲನೆಯದರಲ್ಲಿ ಮಹಾಪಧಮನಿಯಲ್ಲಿ ಹರಿಯುವ ರಕ್ತದ ಕೆಂಪುರಕ್ತಕಣಗಳ ವೇಗದ ಅಳತೆಯ ಮಾಹಿತಿ ವಾಹಕವಾಗಿ ಅತಿಶಬ್ದವನ್ನು ಉಪಯೋಗಿಸಲಾಗುತ್ತದೆ. ಕಾಲಕಾಲಕ್ಕೆ ರಕ್ತದ ವೇಗವನ್ನು ಅಭ್ಯಸಿಸಿದರೆ, ಮಹಾಪಧಮನಿಯ ಅಡ್ಡಕೊಯ್ತವನ್ನು ಊಹಿಸಿಕೊಂಡರೆ, ಸಂಚಾರದಲ್ಲಿರುವ ರಕ್ತದ ಮೊತ್ತವನ್ನು ಗೊತ್ತುಪಡಿಸಬಹುದು. ವೇಗದ ಎದುರು ಕಾಲದ ಆಲೇಖದ ಓಟವನ್ನು (ಸ್ಲೋಪ್) ಶೋಧಿಸಿ ಹೃದಯದ ರಾಶಿಯ (ಮಾಸ್) ಅಂದಾಜು ಇದ್ದರೆ ಹೃದಯ ಬಲವನ್ನು ಅಭ್ಯಸಿಸಬಹುದು. ಈ ಪದ್ಧತಿ ಊಹಾರೋಗ ನಿರ್ಣಯದ ತಂತ್ರವಾಗಿ ಬೆಳೆಯಬಹುದಾಗಿದೆ.

	ಎರಡನೆಯದನ್ನು ಹೃದಯದ ಎಡ ಹೃತ್ಕರ್ಣ ಹಾಗೂ ಹೃತ್ಕುಕ್ಷಿಗಳ ಮಧ್ಯೆ ಇರುವ ದ್ವಿಪಕ್ಷ ಕವಾಟದ (ಮಿತ್ರಲ್ ಕವಾಟ) ಪರೀಕ್ಷೆಯಲ್ಲಿ ಉಪಯೋಗಿಸಬಹುದು. ಈ ಕವಾಟದ ಚಲನೆಯ ವೇಗ ಅದರ ಕಾರ್ಯ ಕುಶಲತೆಯ ಪ್ರತೀಕವಾಗಿದೆ. ಸಾಮಾನ್ಯವಾಗಿ ಇದು ಪ್ರತಿಸೆಕೆಂಡಿಗೆ 85 ರಿಂದ 160 mm. ನಷ್ಟು ಚಲಿಸುತ್ತದೆ. ಹೃದಯದ ಅಸ್ವಸ್ಥತೆಯುಳ್ಳವರಲ್ಲಿ, ಉದಾಹರಣೆಗೆ ದ್ವಿಪಕ್ಷ ಕವಾಟ ಹೃಸ್ವತೆ ಉಳ್ಳವರಲ್ಲಿ ಕೊಬ್ಬಿನಂಥ ಪದಾರ್ಥಗಳು ಸಂಚಯಿತವಾಗುವುದರಿಂದ ಸ್ಥಿತಿ ಸ್ಥಾಪಕತ್ವದಂತ ವೈಶಿಷ್ಟ್ಯಗಳು ಬದಲಾಗಿ ಈ ಕವಾಟದ ವೇಗ ಪ್ರತಿ ಸೆಕೆಂಡಿಗೆ 2 ರಿಂದ 35 mm. ತನಕವೂ ಕಡಿಮೆಯಾಗುತ್ತದೆ. ಅತಿಶಬ್ದಮಿಡಿತ ಪದ್ಧತಿಯಿಂದ ದ್ವಿಪಕ್ಷಕವಾಟದ ತಾತ್‍ಕ್ಷಣಿಕ ಸ್ಥಾನವನ್ನು ಕ್ಯಾಥೋಡ್ ಕಿರಣ ನಳಿಕೆಯ ಮೇಲೆ ದರ್ಶಿಸಿ ನಿರೋಗಿ ಹಾಗೂ ಹೃಸ್ವತೆಯ ರೋಗಿಗಳನ್ನು ಅದರ ಮೇಲೆ ತುಲನೆ ಮಾಡುವುದು ಸಾಧ್ಯ. ಹೃದ್ರೋಗಿಗಳನ್ನು ಈ ರೀತಿ ವಿನಾಶಕವಲ್ಲದ ಪರೀಕ್ಷೆಗಳಿಗೆ ಒಳಪಡಿಸಬಹುದು. ಭಾರತದ ಅನೇಕ ನಗರಗಳಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಲಿದೆ. ಈ ರೀತಿಯ ಉಪಕರಣಗಳಿಂದ ಬಹ್ವಂಶ ಜನತೆಯನ್ನು ಪರೀಕ್ಷಿಸಿ ಶುಶ್ರೂಷೆಯ ಉಪಾಯಗಳನ್ನು ಕೈಕೊಳ್ಳಬಹುದು.

	ಜೀವ ವಿದ್ಯುತ್ ಸಂಜ್ಞೆಗಳು : ಎಲ್ಲ ಸ್ನಾಯು ತಂತುಗಳ ವಿದ್ಯುತ್ ಚಟುವಟಿಕೆಯೂ  ಆ ಸ್ನಾಯುವಿನ ಒಟ್ಟು ಚಟುವಟಿಕೆಗೆ ಪೂರಕವಾಗಿರುತ್ತದೆ. ಸಂಕ್ಷಿಪ್ತವಾಗಿ ಒಂದು ಸ್ನಾಯು ವೋಲ್ಟೇಜ್‍ಉತ್ಪಾದಕದಂತೆ ಕಾರ್ಯ ಮಾಡುತ್ತದೆ. ಸ್ನಾಯುಗಳ ಸಾಮಾನ್ಯ ಆರೋಗ್ಯ ಹಾಗೂ ಈ ವಿದ್ಯುತ್ ಚಟುವಟಿಕೆಗಳಲ್ಲಿ ಪರಸ್ಪರ ಸಂಬಂಧ ಉಂಟು. ಈ ಸ್ನಾಯು ವಿದ್ಯುತ್ ಸಂಜ್ಞೆಗಳ ಅಧ್ಯಯನಕ್ಕೆ ಸ್ನಾಯುವಿದ್ಯುದಾಲೇಖ (ಎಲೆಕ್ಟ್ರೋಮಯೋಗ್ರಫಿ) ಎಂದು ಹೆಸರು. ವಿಶಿಷ್ಟ ಧಾತುಗಳಿಂದ ರಚಿಸಿದ ಎಲೆಕ್ಟ್ರೋಡುಗಳಿಂದ ಈ ಸ್ನಾಯು ವಿದ್ಯುತ್ ಸಂಜ್ಞೆಗಳನ್ನು ಗುರುತಿಸಬಹುದು. ಕುಷ್ಠರೋಗ, ಪೋಲಿಯೋ ಹಾಗೂ ಅರ್ಧಾಂಗ ವಾಯುವಿನಂಥ ರೋಗಗಳನ್ನು ವಿದ್ಯುತ್ ಪದ್ಧತಿಗಳಿಂದ ರೋಗನಿರ್ಣಯಕ್ಕಾಗಿ ಪರೀಕ್ಷಿಸಬಹುದೆಂದು ಸ್ನಾಯುವಿದ್ದುದಾಲೇಖದ ಅಭ್ಯಾಸ ತೋರಿಸಿದೆ. ಅಸ್ವಸ್ಥತೆಗೊಳಗಾದ ಭಾಗಗಳ ವಿದ್ಯುತ್ ಚಟುವಟಿಕೆಯೊಡನೆ ಹೋಲಿಸಿ ಇದನ್ನು ಸಾಧಿಸಬಹುದು. 70 ರಿಂದ 100 ಲಕ್ಷ ಜನರು ಕುಷ್ಠರೋಗದಿಂದ ಬಳಲುವ ನಾಡಾದ ಭಾರತಕ್ಕೆ ಈ ಸಂಶೋಧನೆ ಅತಿ ಸಮಂಜಸ ಹಾಗೂ ಉಪಯುಕ್ತವಾದದ್ದು. ರೋಗನಿರ್ಣಯವನ್ನು ಅತಿ ಶೀಘ್ರವಾಗಿ ಸಾಧಿಸುವ ವ್ಯವಸ್ಥೆ ಈ ದಿಶೆಯಲ್ಲಿ ಬಲು ಬೆಲೆಯುಳ್ಳದ್ದಾಗಿದೆ. ರೋಗಿಯ ನೆತ್ತಿಯಿಂದ ವಿಯುತ್ ಸಂಜ್ಞೆಗಳನ್ನು ಗುರುತಿಸುವುದು ಮಿದುಳಿನ ಅಲೆಗಳನ್ನು ಇದು ಬಿಂಬಿಸುತ್ತದೆ. ಮಿದುಳಿನ ವಿದ್ಯುದಾಲೇಖ ಕ್ರಮಗಳ ಅರ್ಥ ಹಚ್ಚಲು ದೀರ್ಘ ಅಧ್ಯಯನ ಮಾಡಲಾಗಿದೆ. ಈ ಆಲೇಖಗಳ ಕ್ರಮಗಳ ಪುನರಾವರ್ತನೆ. ಸಂಜ್ಞೆಗಳಲ್ಲಿರುವ ವಿದ್ಯುತ್ತು ಮುಂತಾದವನ್ನು ಗೊತ್ತುಹಚ್ಚಲು ಹಾಗೂ ಅವನ್ನು ಮೌಲ್ಯೀಕರಿಸಲು ಗಣಕ ವಿಧಾನಗಳನ್ನೂ ಬಳಸಲಾಗಿದೆ. ಗುಂಡಿಗೆ ವಿದ್ಯುದಾಲೇಖ ವೈದ್ಯನ ಕೈಯಲ್ಲಿ ಒಂದು ಸಾಮಾನ್ಯ ಉಪಕರಣವಾಗಿ ಪರಿಣಮಿಸಿದೆ. ಈ ವಿದ್ಯುದಾಲೇಖದ ಸಂಜ್ಞೆಗಳು ಗುಂಡಿಗೆಯ ಸ್ನಾಯುಗಳ ವಿದ್ಯುಚ್ಚಟುವಟಿಕೆಗಳನ್ನು ಬಿಂಬಿಸುತ್ತವೆ. ಗುಂಡಿಗೆ ವಿದ್ಯುದಾಲೇಖ ವಿಶ್ಲೇಷಣೆ ಹೃತ್ ಘಟನೆಗಳ ಮಧ್ಯೆ ಇರುವ ಕಾಲಾವಕಾಶಕ್ಕೆ ಸಂಬಂಧಿಸಿವೆ. ಈ ಕಾಲಾವಕಾಶಗಳಲ್ಲಿಯ ವ್ಯತ್ಯಾಸಗಳು ಸಾಮಾನ್ಯವಾಗಿ ಹೃತ್ ಸ್ನಾಯುಗಳ ಕಾರ್ಯವಿಕೃತಿಗೆ ಕಾರಣವಾಗಿರುತ್ತವೆ. ಉದಾಹರಣೆಗೆ P ಮತ್ತು ಕಿಖS ಸಂಯುಕ್ತಗಳ ಮಧ್ಯದ ಹೆಚ್ಚಿದ ಕಾಲಾವಕಾಶ ಹೃತ್ಕರ್ಣ-ಕುಕ್ಷಿ ಸಂಧಿಸ್ಥಾನಕ್ಕೆ ಗತಿಕಾರಕದಿಂದ ತರಲಾಗುವ ಸಂಜ್ಞೆಗಳಲ್ಲಿ ವಿಳಂಬವಾದದ್ದನ್ನು ಬಿಂಬಿಸುತ್ತದೆ; ಹಾಗೆಯೇ ಕಿಖS ಸಂಯುಕ್ತದ ಹಿಗ್ಗುವಿಕೆ ಪರ್ಕಿಂಜೀ ತಂತುಗಳಲ್ಲಿ ಆದ ವಿಳಂಬವನ್ನು ತೋರಿಸುತ್ತದೆ ಇತ್ಯಾದಿ. ಹೀಗೆ ಗುಂಡಿಗೆ ವಿದ್ಯುದಾಲೇಖವು ರೋಗ ನಿರ್ಣಾಯಕ ವಿವರಣೆಗಾಗಿ ಮಾಡುವ ಹೃದ್ಘಟನಾಕ್ರಮಗಳ ಅಧ್ಯಯನವೆಂದಾಯಿತು. ಈ ಕ್ರಮಗಳ ಬದಲಾವಣೆಯ ರೀತಿಯನ್ನು ಗಣಕದ ಬಳಕೆಯಿಂದ ಶೋಧಿಸಬಹುದು. ಇದೂ ರೋಗದ ಊಹೆಗೆ ಅತ್ಯಂತ ಅನುಕೂಲವಾದದ್ದು.

	ಭಾರತದಲ್ಲಿ ಜೀವವೈದ್ಯ ಎಂಜಿನಿಯರಿಂಗಿನ ಸ್ಥಾನ ; ಭಾರತದಲ್ಲಿ ಕೆಲವೇ ವ್ಯಕ್ತಿಗಳು ಕೆಲನಿರ್ದಿಷ್ಟ ಸಮಸ್ಯೆಗಳಲ್ಲಿ ಕುತೂಹಲವಿಟ್ಟುಕೊಂಡು ಜೀವವೈದ್ಯ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆ ಮುಂದುವರಿಸಿದ್ದಾರೆ. ಇದು ಇನ್ನೂ ತನ್ನ ಶೈಶವಾವಸ್ಥೆಯಲ್ಲಿದೆ. ಇದರ ಅಭಿವೃದ್ಧಿಗೆ ನಿರ್ದೇಶಿತ ಪ್ರಯತ್ನದ ಅವಶ್ಯಕತೆ ಉಂಟು. ಕಾರಣ ಶರೀರವಿಜ್ಞಾನ, ಭೌತವಿಜ್ಞಾನ ಹಾಗೂ ಇಂಜಿನಿಯರಿಂಗ್ ಬಲ್ಲವರನ್ನು ಒಂದುಗೂಡಿಸಿ ಒಂದು ಶಿಕ್ಷಿತ ತಂಡವನ್ನು ನಿರ್ಮಿಸುವುದು ಆವಶ್ಯ. ಭಾರತದ ತಾಂತ್ರಿಕ ಸಂಸ್ಥೆಗಳು ಹಾಗೂ ರೂರ್ಕಿ ವಿಶ್ವವಿದ್ಯಾಲಯಗಳು ಜೀವ ವೈದ್ಯಕೀಯ ಎಂಜಿನಿಯರಿಂಗನ್ನು ಈಗ ಕಲಿಸಲಾರಂಭಿಸಿವೆ. ಆದರೂ ಈ ವಿಷಯವನ್ನು ಪದವಿಗೆ ಹಾಗೂ ಸ್ನಾತಕೋತ್ತರ ಪದವಿಗೆ ಉತ್ತಮವಾಗಿ ಕಲಿಸುವ ವ್ಯವಸ್ಥೆಯನ್ನು ಎಲ್ಲ ಕಡೆಗೆ ಶೀಘ್ರವಾಗಿ ಮಾಡಬೇಕಾದುದು ಅಪೇಕ್ಷಿತ.

	ವಿದ್ಯುದಾಘಾತ ಹಾಗೂ ರೋಗಿಯ ಸಂರಕ್ಷಣೆ : ವೈದ್ಯಕೀಯ ಉಪಚಾರದಲ್ಲಿ ವಿದ್ಯುದುಪಕರಣಗಳು ಸಾಕಷ್ಟು ಅನುಕೂಲತೆಗಳನ್ನು ಕೂಡ ತಂದೊಡ್ಡಿವೆ. ಮುಂದುವರಿದ ದೇಶಗಳಲ್ಲಿ ವೈದ್ಯಕೀಯ ಉಪಕರಣಗಳ ಉಪಯೋಗದಲ್ಲಿ ಸೌಮ್ಯ ಅಥವಾ ತೀವ್ರ ಸ್ವರೂಪದ ಅಸ್ವಸ್ಥತೆ ಅಥವಾ ಮರಣಗಳನ್ನು ಉಂಟು ಮಾಡಬಹುದಾದದ ವಿದ್ಯುತ್ ಪ್ರವಾಹಗಳನ್ನು ಅಳೆದು ಸಂರಕ್ಷಣಾ ಪ್ರಮಾಣಗಳನ್ನು ನಿರ್ಧರಿಸಿದ್ದಾರೆ. ಇವನ್ನು ಮುಂದಿನ ಕೋಷ್ಟಕದಲ್ಲಿ ಕೊಟ್ಟದೆ.
ಕೋಷ್ಟಕ 1: ಸರಾಸರಿ ಮಾನವದೇಹದ (ಮುಂಡ) ಮೇಲೆ ವಿದ್ಯುದಾಘಾತದಿಂದಾಗುವ ಪರಿಣಾಮ
ಪ್ರವಾಹ ತೀವ್ರತೆ 
1 ಸೆಕೆಂಡು ಸಂಪರ್ಕ
ಪರಿಣಾಮಗಳು

1 ಮಿಲಿ ಅಂಪೇರ್
ತಿಳಿವಿನ ಪ್ರಾರಂಭ

5 "
ಕೇಡುಂಟಾಗದ ಗರಿಷ್ಠ ಪ್ರವಾಹವೆಂದು ಒಪ್ಪಲಾಗಿದೆ

10-20 "
ಕೆಲಕಾಲ ಸ್ನಾಯು ಸಂಕುಂಚನವಾಗಬಹುದಾದ

ಪ್ರವಾಹ

50 "
ನೋವು, ಮೂರ್ಛೆ ಹೋಗಬಹುದಾದ ಪ್ರಸಂಗ,

  ಆಯಾಸ, ಗಾಯ ; ಗುಂಡಿಗೆ ಹಾಗೂ ಉಸಿರಾಟದ

ಕ್ರಿಯೆಗಳು ನಡೆಯುತ್ತವೆ.

100-300 "
ಹೃತ್ಕುಕ್ಷಿಗೆ ಹಾನಿ ತಗಲುತ್ತದೆ. ಅದರೆ ಫುಪ್ಫುಸ 

ಸರಿಯಾಗಿರುತ್ತದೆ.

6 ಆಂಪೇರುಗಳು
ಹೃತ್ ಸ್ನಾಯುಗಳ ಸಂಕುಂಚನದ ಅನಂತರ

ಸಾಮಾನ್ಯ ಹೃದಯಸ್ಪಂದನ. ಕ್ಷಣಿಕ ಫುಪ್ಫುಸದ

ಕ್ರಿಯಾಹೀನತೆ ಹಾಗೂ ಪ್ರವಾಹ ಸಾಂದ್ರತೆ*

ಹೆಚ್ಚಾಗಿದ್ದರೆ ಸುಡುವಿಕೆ

 ಪ್ರವಾಹ ಸಾಂದ್ರತೆ ಎಂದರೆ ಸಲೆಗೆ ಇರುವ ಪ್ರವಾಹ ಶರೀರದ ಬಹುಭಾಗಕ್ಕೆ ಆಘಾತವಾದರೆ ಅದು ಸೌಮ್ಯವೆನಿಸುವುದು. ಆದರೆ ಅದೇ ಅಲ್ಪಭಾಗಕ್ಕಾದರೆ ಆಘಾತವೆನಿಸುವುದು.

ವೈದ್ಯಕೀಯ ತಪಾಸಣೆಯಲ್ಲಿ ಎಲೆಕ್ಟ್ರೋಡುಗಳನ್ನು ದೇಹದೊಳಕ್ಕೆ ನೆಡುತ್ತಾರೆ. ಇವು ಅಂತಸ್ಥ ಎಲೆಕ್ಟ್ರೊಡುಗಳು. ಇವುಗಳ ಮೂಲಕ ಹರಿಯುವ ವಿದ್ಯುತ್ಪ್ರವಾಹ ನೆಲದೆಡೆಗೆ ಸಾಗಲು ಅನುಸರಿಸುವ ಪಥ ದೇಹದ ಅತಿ ಕೋಮಲ ಭಾಗವಾದ ಗುಂಡಿಗೆಯ ಸಮೀಪ ಉಂಟು. ಆದ್ದರಿಂದ ಇಂಥ ಪ್ರಯೋಗಗಳಲ್ಲಿ ಎದುರಾಗುವ ಅಪಾಯಗಳು ಗಂಭೀರಮಟ್ಟದವು. ನಾಯಿಗಳಲ್ಲಿ ಹೃತ್‍ಕುಕ್ಷಿಗೆ 20 ಮೈಕ್ರೋಆಂಪೇರ್ ಪ್ರವಾಹದಿಂದ ಹಾನಿ ಉಂಟಾಗುಬಹುದೆಂದು ಪ್ರಯೋಗಗಳು ತೋರಿಸಿವೆ. ಅಮೆರಿಕದಲ್ಲಿ ಅಂತಸ್ಥ ವ್ಯವಸ್ಥೆಗಳಲ್ಲಿ 10 ಮೈಕ್ರೊ ಆಂಪೇರ್ ಸುರಕ್ಷಾಮಿತಿಯಿದೆ.  ಇಂಗ್ಲೆಂಡಿನಲ್ಲಿ ಇದರ ಮಿತಿ 100 ಮೈಕ್ರೋ ಆಂಪೇರುಗಳು. ಆದರೆ ಭಾರತೀಯ ಆಸ್ಪತ್ರೆಗಳಲ್ಲಿ ವಿದ್ಯುತ್ ತಂತಿ ಜೋಡಣೆ ಕೆಲಸ ಅಷ್ಟು ಸಮಂಜಸವಲ್ಲ ; ಅಲ್ಲದೆ ಪ್ರವಾಹ ಭೂಸ್ಪರ್ಶವನ್ನೂ (ಗ್ರೌಂಡಿಂಗ್) ಸರಿಯಾಗಿ ಮಾಡಿರುವುದಿಲ್ಲ. ಆದ್ದರಿಂದ ರೋಗಿಗಳು ಹೆಚ್ಚಿನ ವೋಲ್ಟೇಜು ಪಡೆಯುವ ಅಪಾಯ ಉಂಟು.  ಪರಂಪರಾನುಗತ ವ್ಯವಸ್ಥೆಗಳಲ್ಲಿ ಸಾಮಾನ್ಯ ಭೂಸ್ಪರ್ಶಕದೊಡನೆಯೇ ಭೌತಪರಿಮಾಣ ಅಥವಾ ಸಂಜ್ಞೆಗಳನ್ನು ಶೋಧಿಸಲಾಗುತ್ತದೆ. ಪ್ರಧಾನ ವಿದ್ಯುತ್‍ಪ್ರವಾಹದ ಭೂಸ್ಪರ್ಶ ತಂತಿ ಅಕಸ್ಮಾತ್ತಾಗಿ ಕಡಿತವಾದಲ್ಲಿ ಭೂಸ್ಪರ್ಶಪ್ರವಾಹವೆಲ್ಲ ರೋಗಿಯ ಮೂಲಕ ನೆಲವನ್ನು ಸೇರುತ್ತದೆ. ರೋಗಿಗೆ ಒಂದಕ್ಕಿಂತ ಹೆಚ್ಚು ವಿದ್ಯುದುಪಕರಣಗಳನ್ನು ಜೋಡಿಸಿದಾಗ ಹೀಗಾದರೆ ಪರಿಸ್ಥಿತಿ ಇನ್ನೂ ಹದಗೆಡುವುದು. ಇಂಥ ಅಪಾಯಗಳನ್ನು ತಡೆಗಟ್ಟಲು, ಎಲ್ಲ ವೈದ್ಯಕೀಯ ಉಪಕರಣಗಳಲ್ಲಿಯೂ ವಿದ್ಯುನ್ಮಾರ್ಗಗಳ ಬೇರ್ಪಡೆಯ ವ್ಯವಸ್ಥೆಯೂ ಇರಬೇಕು. ಈ ಎರಡೂ ತತ್ತ್ವಗಳು ಶಸ್ತ್ರಚಿಕಿತ್ಸಾಗೃಹದಲ್ಲಿ ಅಂತಸ್ಥ ಎಲೆಕ್ಟ್ರೋಡುಗಳಿಂದ ರೋಗಿಗೆ 10 ಮೈಕ್ರೋ ಆಂಪೇರುಗಳಿಗಿಂತ ಹೆಚ್ಚಿನ ವಿದ್ಯುತ್ಪ್ರವಾಹ ದೊರೆಯದಂತೆ ಮಾಡುವ ಉದ್ದೇಶ ಉಳ್ಳವು. ರೋಗಿ ಬೇರ್ಪಡೆ ವ್ಯವಸ್ಥೆಯಲ್ಲಿ ಭೌತ ಪರಿಮಾಣಗಳು ವಿದ್ಯುತ್ ಕಾಂತ ವಾಹಕ ಸಂಜ್ಞೆಗಳಿಂದ ಕಂಡುಹಿಡಯಲ್ಪಡುತ್ತವೆ. ಈ ಪರಿಮಾಣಗಳು ಸಂಜ್ಞೆಗಳನ್ನು ಒಟ್ಟುಗೂಡಿಸಿ, ಬೇಕಾದ ಮಾಹಿತಿಯನ್ನು ಪ್ರಧಾನ ಭಾಗಕ್ಕೆ ಕಳಿಸುತ್ತವೆ. ವಿದ್ಯುನ್ಮಾರ್ಗ ಬೇರ್ಪಡೆ ಪರಿವರ್ತಕ ವಿದ್ಯುತ್ ವ್ಯವಸ್ಥೆಯಲ್ಲಿ ಅತ್ಯಂತ ಆವಶ್ಯಕ ಭಾಗ. ಇದು ಸಂವೇದಕ ರೋಗಿಯ ಅಕ್ಕಪಕ್ಕದಲ್ಲಿ ವೋಲ್ಟೇಜನ್ನು ಕಡಿಮೆ ಮಾಡುತ್ತದೆ (ಅಮೆರಿಕದಲ್ಲಿ ಈ ವ್ಯವಸ್ಥೆಗೆ 8,000 ದಿಂದ 15,000 ರೂಪಾಯಿ ವರೆಗೆ ವೆಚ್ಚ ತಗಲುತ್ತದೆ. ವಿಶಿಷ್ಟ ಪ್ರಸಂಗಗಳಲ್ಲಿ ಇದರ ಉಪಯುಕ್ತತೆಯನ್ನು ಜೀವ ಎಂಜಿನಿಯರ್ ಯೋಚಿಸಬೇಕು). ಏನಾದರೂ ರೋಗಿಗಳ ಒಟ್ಟು ಪರಿಸರವನ್ನು ಯಾವುದೇ ಪ್ರಸಂಗದಲ್ಲಿ ಗಮನಿಸಬೇಕು. ಇವುಗಳಲ್ಲಿ (1) ಉಪಕರಣದ ಯೋಗ್ಯ ಭೂಸ್ಪರ್ಶ; (2) ಭೂಸ್ಪರ್ಶ ವ್ಯವಸ್ಥೆಯ ನಿಯಮಿತ ಪರೀಕ್ಷೆ ; (3) ರೋಗಿಯನ್ನು ಭೂಸ್ಪರ್ಶಕದಿಂದ ಬೇರ್ಪಡಿಸುವ ಉಪಕರಣ ಹಾಗೂ (4) ವಿದ್ಯುತ್ತು ಬೇರ್ಪಡೆ ಪರಿವರ್ತಕದ ಮೌಲ್ಯ-ಇವು ಮುಖ್ಯವಾದವು.

ಕೆಲ ಪರ್ಯಾಯ ಪ್ರವಾಹ ವ್ಯವಸ್ಥೆಗಳಲ್ಲಿ (ಎಸಿ) ಇತ್ತೀಚೆಗೆ ಪ್ರವಾಹಮಾರ್ಗ ಬೇರ್ಪಡೆ ಪರೀಕ್ಷಕವೆಂಬ ಉಪಕರಣವನ್ನು ಬಳಸುತ್ತಾರೆ. ಇಲ್ಲಿ ಮಾರ್ಗ ವೋಲ್ಟೇಜುಗಳನ್ನು ಗತಿಶೀಲವಾಗಿ ಪರೀಕ್ಷಿಸಿ ಸಜೀವ ಹಾಗೂ ನಿರ್ಜಿವ ಕೊನೆಗಳಿಂದ ಭೂಸ್ಪರ್ಶಕದ ವರೆಗಿನ ಅವಬಾಧೆ (ಇಂಪೆಡೆನ್ಸ್) ನಿರ್ದಿಷ್ಟಪಡಿಸಿದ ಬೆಲೆಗಿಂತ ಕಡಿಮೆಯಾದರೆ ಎಚ್ಚರ ಗಂಟೆಯೊಂದನ್ನು ಬಾರಿಸುತ್ತದೆ. (ಅಮೆರಿಕದ ಹೆವಲೆಟ್ ಪೆಕಾರ್ಡ್ ಉಪಕರಣ ಕಂಪನಿ ಇದನ್ನು 120 ಕಿಲೊ ಓಮ್‍ಗಳಷ್ಟಕ್ಕೆ ಇಟ್ಟಿದ್ದಾರೆ). ಒಬ್ಬ ರೋಗಿಗೆ ಒಂದಕ್ಕಿಂತ ಹೆಚ್ಚು ಉಪಕರಣಗಳನ್ನು ಇಟ್ಟಿದ್ದರೆ ಇಂಥ ಪರೀಕ್ಷಕಗಳನ್ನು ಶಾಶ್ವತವಾಗಿ ಜೋಡಿಸಬೇಕು.
(ಜೆ.ಎಸ್.ಎ.)	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ